ಡ್ರೈಪೆಟೆಸ್ ಮಲಬಾರಿಕ (Bedd.) Airy Shaw - ಯೂಫೊರ್ಬಿಯೇಸಿ

Synonym : ಸೈಕ್ಲೋಸ್ಟೆಮಾನ್ ಮಲಬಾರಿಕಸ್ Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗೆ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ಹಾಗೂ ದಟ್ಟವಾದ ಕಂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ;ಕಾವಿನೆಲೆಗಳು ರೇಖಾತ್ಮಕ-ಭರ್ಜಿಯ ಆಕಾರದಲ್ಲಿದ್ದು 0.6 ಸೆಂ.ಮೀ. ವರೆಗಿನ ದ್ದ ಹೊಂದಿರುತ್ತವೆ; ತೊಟ್ಟುಗಳು 0.5-0.6 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ ಹಾಗೂ ಕಾಲುವೆಗೆರೆ ಸಮೇತವಿರುತ್ತವೆ ಹಾಗೂ ಕಂದು ಬಣ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು14 - 27 X 3 – 8.5 ಸೆಂ ಮೀ. ಗಾತ್ರ, ಚತುರಸ್ರದ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಕ್ರಮೇಣವಾಗಿ ಅಥವಾ ಥಟ್ಟನೆ ಚೂಪಾಗುವ ಮಾದರಿಯಲ್ಲಿದ್ದು ಬುಡ ಅಸಮವಾಗಿರುತ್ತದೆ; ಅಂಚು ಸಾಮಾನ್ಯವಾಗಿ ನಯವಾಗಿರುತ್ತದೆ; ಮೇಲ್ಮೈ ಉಪ-ತೊಗಲನ್ನೋಲುವ ಮಾದರಿಯಲ್ಲಿರುತ್ತದೆ; ಪತ್ರದ ತಳ ಭಾಗದ ಮಧ್ಯ ನಾಳ ಕಂದು ಬಣ್ಣದ ದಟ್ಟ ಮೃದು ತುಪ್ಪಳ ದಿಂದ ಕೂಡಿರುತ್ತದೆ ಮತ್ತು ಮೇಲ್ಭಾಗದಲ್ಲಿ ರೋಮ- ರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 7-10 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆ ದಿಂಡಿಗೆ ಅಡ್ಡಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ಮತ್ತು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿದ್ದು ಅಕ್ಷಾಕಂಕುಳಿನಲ್ಲಿ ಅಥವಾ ಪಾರ್ಶ್ವ ಭಾಗದಲ್ಲಿದ್ದು ಹಳೆ ಕವಲುಗಳ ಮೇಲೆ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಗೋಳಾಕಾರದಲ್ಲಿದ್ದು ಕಂದು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿದ್ದು ತೊಟ್ಟು ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

200 ರಿಂದ 800 ಮೀ. ನಡುವಿನ ಕಡಿಮೆ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಬಹುತೇಕವಾಗಿ ಉಪ-ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.ಕೆಲವು ವೇಳೆ 1000 ಮೀ. ವರೆಗಿನ ತ್ತರದ ಪ್ರದೇಶಗಳಿಗೂ ವಿಸ್ತರಿಸುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯಲ್ಲಿ ಕಂಡುಬರುತ್ತದೆ..

ಸ್ಥಿತಿ :

ಅಪರೂಪ (Nayar, 1997)

ಗ್ರಂಥ ಸೂಚಿ :

Kew Bull. 23. 56. 1969; Gamble, Fl. Madras 2: 1302. 1993 (re. ed); Sasidharan, Biodiversity documentation for Kerala- Flowering Plants, part 6: 415. 2004.

Top of the Page